ಕೀಟಾಪೊಡ

ವಲಯವಂತ (ಅನೆಲಿಡ) ವಿಭಾಗಕ್ಕೆ ಸೇರಿದ ಒಂದು ಮಖ್ಯವರ್ಗ. ಇದರಲ್ಲಿ ಪಾಲಿಕೀಟ ಮತ್ತು ಆಲಿಗೊಕೀಟ ಎಂಬ ಎರಡು ಗಣಗಳಿವೆ. ಕೆಲವರು ಈ ಗಣಗಳಿಗೆ ಪ್ರತ್ಯೇಕವಾದ ವರ್ಗಸ್ಥಾನಗಳನ್ನು ಕೊಟ್ಟು ಅವನ್ನು ಕೀಟಾಪೊಡ ಅಧಿವರ್ಗದ (ಸೂಪರ್‍ಕ್ಲಾಸ್) ಅಡಿಯಲ್ಲಿಡಿವುದು ಆಚರಣೆಗೆ ಬಂದಿದೆ. ಈ ಗುಂಪಿನ ಪ್ರಾಣಿಗಳಲ್ಲೆಲ್ಲ ಬಿರುಗೂದಲುಗಳು (ಸೀಟಿ ಅಥವಾ ಕೀಟೆ) ಬಿರುಗೂದಲು ಕುಳಿಗಳಲ್ಲಿ ಅಥವಾ ದೇಹದ ಎರಡು ಪಕ್ಕಗಳಲ್ಲಿ ಹೊರಚಾಚಿರುವ ಸ್ನಾಯುಮಯವಾದ ಪಾಶ್ರ್ವಪಾದಗಳ ಮೇಲೆ ಜೋಡಣೆಯಾಗಿರುವುದು ಒಂದು ಮುಖ್ಯ ವೈಶಿಷ್ಟ್ಯ. ಬಿರುಗೂದಲುಗಳ ಸಂಖ್ಯೆಯ ಮತ್ತು ಅವುಗಳ ಅಳವಡಿಕೆಯ ಆಧಾರದ ಮೇಲೆ ಈ ಗುಂಪಿನ ಪ್ರಾಣಿಗಳನ್ನು ಪಾಲಿಕೀಟ (ಬಹು ಬಿರುಗೂದಲಿನ ವಲಯವಂತಗಳು) ಮತ್ತು ಆಲಿಗೊಕೀಟಗಳೆಂದು (ಮಿತ ಬಿರುಗೂದಲಿನ ವಲಯವಂತಗಳು) ವರ್ಗೀಕರಿಸಲಾಗಿದೆ.

 ಕೀಟಾಪೊಡ ಗುಂಪಿನ ಪ್ರಾಣಿಗಳ ದೇಹ ಸಾಮಾನ್ಯವಾಗಿ ದ್ವಿಪಾಶ್ರ್ವಸಮ್ಮಿತಿಯಿಂದ ಕೂಡಿದ್ದು ಖಂಡ ಅಥವಾ ವಲಯಗಳಾಗಿ ವಿಭಾಗವಾಗಿದೆ. ಖಂಡಗಳು ಒಂದರ ಹಿಂದೊಂದು ಒಂದು ಸರಣಿಯಲ್ಲಿ ಅಳವಡಿಸಿರುತ್ತವೆ. ಈ ದೇಹದ ಖಂಡೀಕರಣ (ಸೆಗ್ಮೆಂಟೇಷನ್) ದೇಹದ ಮೇಲ್ಭಾಗದಲ್ಲಿ ಮಾತ್ರ ಸೀಮಿತಗೊಂಡಿರದೆ ಒಳಭಾಗದಲ್ಲೂ ವ್ಯಾಪಿಸಿದೆ. ದೇಹದ ಗೋಡೆಗೂ ಮತ್ತು ಅನ್ನನಾಳದ ಗೋಡೆಗೂ ಮಧ್ಯೆಯಿರುವ ದೇಹಾಂತರಾವಾಕಾಶ ಅಥವಾ ಸೀಲೋಮ್ ಕೂಡ ನಡುಪೊರೆಗಳಿಂದ (ಸೆಪ್ಟ) ವಿಬಾಗವಾಗಿದೆ. ಈ ಗುಂಪಿನ ಪ್ರಾಣಿಗಳು ವಿವಿದ ಬಗೆಯ ಜೀವನಕ್ಕೆ ಹೊಂದಿಕೊಂಡಿರುವುದರಿಂದ ಇವುಗಳ ದೇಹದ ಹೊರ ಹಾಗೂ ಒಳ ಅಂಗಗಳ ರಚನೆಯಲ್ಲಿ ಅನೇಕ ರೀತಿಯ ಮಾರ್ಪಾಡುಗಳನ್ನು ಕಾಣಬಹುದು. ಪಾಲಿಕೀಟ ಗುಂಪಿನಲ್ಲಿ ಸ್ವತಂತ್ರವಾಗಿ ತೆವಳುವ ನೀರಿಸ್, ಬಿಲ ತೋಡಿಕೊಂಡು ವಾಸಿಸುವ ಅರೆನಿಕೋಲ, ನೆಲದಲ್ಲಿ ಬಿಲ ತೋಡಿ ತಮ್ಮ ಸುತ್ತಲೂ ನಳಿಕೆಯನ್ನು ರಚಿಸಿಕೊಂಡು ಜೀವಿಸುವ ಕೀಟಾಪ್ಟಿರಸ್, ಟೆರಬೆಲ್ಲ. ಸಾಬೆಲ್ಲ ಮೊದಲಾದುವು, ತೇಲೀಜು ಜೀವಿಗಳಾದ ಟೋಮಾಪ್ಪಿರಸ್ ಮತ್ತು ನೆಕೊಕೀಟ ಮುಂತಾದವನ್ನು ಕಾಣುತ್ತೇವೆ. ಪರಿಹೊಂದಾಣಿಕಾ ವಿಸ್ತರಣಕ್ಕೆ ತಕ್ಕಂತೆ ಮುಖದ ಮತ್ತು ಶಿರದ ಅಂಗಗಳು, ಪಾಶ್ರ್ವಪಾದಗಳು ಮೊದಲಾದುವು ಮಾರ್ಪಾಟು ಹೊಂದಿರುವುವಲ್ಲದೆ ಚಲನೆ, ಶ್ವಸನ, ಪಚನ ಮೊದಲಾದ ದೇಹಕ್ರಿಯೆಗಳೂ ಬದಲಾವಣೆಯನ್ನು ಪ್ರದರ್ಶಿಸುತ್ತವೆ. ಸಾಮಾನ್ಯವಾಗಿ ದೇಹದ ಅಗ್ರಭಾಗದಲ್ಲಿ ಪ್ರೋಸ್ಟೋಮಿಯಮ್ ಎಂಬ ಮುಖ ಪೂರ್ವವಿಶಿಷ್ಟವಾಗಿದೆ. ಸ್ವೇಚ್ಚೆಯಾಗಿ ಈಜಾಡುವ ಮತ್ತು ತೆರಳುವ ವಲಯವಂತಗಳಲ್ಲಿ ಕಣ್ಣುಗಳಿವೆ. ಸ್ವರ್ಶತಂತುವಿನ (ಟೆಂಟಕಲ್) ರೂಪದ ಜ್ಞಾನೇಂದ್ರಿಯಗಳಿವೆ. ಆದರೆ ಬಿಲವಾಸಿಗಳಲ್ಲಿ ಅಥವಾ ನೆಲವನ್ನು ಕೊರೆದು ಹುದುಗಿಕೊಳ್ಳುವ ಕ್ರಿಮಿಗಳಲ್ಲಿ ಇವು ಇಲ್ಲ. ಇಂಥ ಪ್ರಾಣಿಗಳ ಚಲನೆಯಲ್ಲಿ, ಬಿರುಗೂದಲು, ಅವುಗಳಿಗೆ ಸಂಬಂಧಿಸಿದ ಸ್ನಾಯುಗಳು ಮತ್ತು ಸ್ವಲ್ಪಮಟ್ಟಿಗೆ ಸೀಲೋಮಿನಲ್ಲಿರುವ ದ್ರವ ನೆರವಾಗುತ್ತವೆ.

 ಈ ಗುಂಪಿನ ಪ್ರಾಣಿಗಳಲ್ಲಿ ಚೆನ್ನಾಗಿ ರೂಪುಗೊಂಡ ರಕ್ತನಾಳಮಂಡಲವಿದೆ. ಇದರಲ್ಲಿ ಡಾರ್ಸಲ್ ಮತ್ತು ವೆಂಟ್ರಲ್ ರಕ್ತನಾಳಗಳು ಪ್ರಮುಖವಾದ ಭಾಗಗಳು, ಪಚನನಾಳದ ಮೇಲ್ಭಾಗದಲ್ಲಿರುವ ಡಾರ್ಸಲ್ ರಕ್ತನಾಳ ರಕ್ತವನ್ನು ಸಂಗ್ರಹಿಸಿಕೊಳ್ಳುವಿದಲ್ಲದೆ, ತನ್ನ ಸಂಕೋಚನದಿಂದ ದೇಹದ ಹಿಂಭಾಗದಿಂದ ಮುಂಭಾಗಕ್ಕೆ ಪ್ರವಹಿಸುವಂತೆ ಮಾಡುತ್ತದೆ. ಅನ್ನನಾಳದ ತಳಭಾಗದಲ್ಲಿರುವ ವೆಂಟ್ರಲ್ ರಕ್ತನಾಳ ರಕ್ತವನ್ನು ದೇಹದ ಇತರ ಭಾಗಗಳಿಗೆ ವಿತರಣೆ ಮಾಡುತ್ತದೆ. ಇದರಲ್ಲಿ ರಕ್ತ ದೇಹದ ಅಗ್ರಭಾಗದಿಂದ ಪಾಶ್ರ್ವಭಾಗಕ್ಕೆ ಹರಿಯುತ್ತದೆ. ಇವೆರಡು ರಕ್ತನಾಳಗಳಿಗೂ ಸಂಬಂಧ ಕಲ್ಪಿಸುವ ಒಂದು ಅಥವಾ ಹಲವು ರಕ್ತನಾಳಗಳಿರುತ್ತವೆ. ಆಲಿಗೊಕೀಟದ ಪ್ರಾಣಿಗಳಲ್ಲಿ ಈ ರಕ್ತನಾಳಗಳು ಪಾಶ್ರ್ವಹೃದಯಗಳಾಗಿ ರೂಪುಗೊಂಡಿವೆ. ಮೇಲೆ ವಿವರಿಸಿದುದು ರಕ್ತಪರಿವಲನೆಯ ಮೂಲವಿನ್ಯಾಸ. ಇದರಲ್ಲಿ ಬಗೆಬಗೆಯ ವ್ಯತ್ಯಾಸಗಳನ್ನು ಕಾಣಬಹುದು. ಸೀಲೋಮ್ ವಿಶಾಲವಾಗಿದ್ದು ಪಚನನಾಳದ ಸುತ್ತಲೂ ವ್ಯಾಪಿಸಿದೆ. ಆದರೆ ಅಕ್ಕಪಕ್ಕದ ಎರಡು ಖಂಡಗಳ ಸೀಲೋಮನ್ನು ಪ್ರತ್ಯೇಕಿಸುವಂತೆ ಸ್ನಾಯುಮಯವಾದ ನಡುಗೋಡೆಗಳು ರೂಪುಗೊಂಡಿವೆ. ಅಲ್ಲವೆ ಪಚನನಾಳವನ್ನು ಸೀಲೋಮ್ ಕುಹರದಲ್ಲಿ ಒಂದು ನಿರ್ದಿಷ್ಟಸ್ಥಾನದಲ್ಲಿಡಲು ಡಾರ್ಸಲ್ ಹಾಗೂ ವೆಂಟ್ರಲ್ ನಡುಗೋಡೆಗಳು ಬೆಳೆದಿರುತ್ತವೆ. ಪಚನಮಂಡಲ ದೇಹದ ಒಂದು ತುದಿಯಲ್ಲಿ ಮತ್ತೊಂದು ತುದಿಯವರೆಗೂ ವ್ಯಾಪಿಸಿದೆ. ಅಂದರೆ  ಬಾಯಿ ಒಂದು ತುದಿಯಲ್ಲಿ ಇದ್ದರೆ ಗುದದ್ವಾರ  ಮತ್ತೊಂದು ತುದಿಯಲ್ಲಿ ಇದೆ. ಕರುಳಿಗೆ ಸಾಮಾನ್ಯವಾಗಿ ಸಂಕುಚನಾ ಸಾಮಥ್ರ್ಯವಿದೆ. ಶ್ವಸನ ಕಾರ್ಯಕಿವಿರು ಅಥವಾ ಕ್ಲೋಮಗಳ ರೂಪದಲ್ಲಿ ಬೆಳೆದಿರುವ ಅಂಗಗಳಿಂದ ನಡೆಯುತ್ತದೆ. ಕೀಟಾಪೊಡ ಪ್ರಾಣಿಗಳ ವಿಸರ್ಜನಾಂಗಗಳಿಗೆ ನೆಫ್ರೀಡಿಯ ಎಂದು ಹೆಸರು. ಸಾಮಾನ್ಯವಾಗಿ ಒಂದೊಂದು ಖಂಡದಲ್ಲಿ ಒಂದು ಜೊತೆ ನೆಫ್ರೀಡಿಯಗಳಿರುತ್ತವೆ. ಮಾದರಿ ರೂಪದ ನೆಫ್ರೀಡಿಯಮ್ ಸಂಕೀರ್ಣ ಸ್ವರೂಪದ ಒಂದು ನಳಿಕೆ. ಅದರಲ್ಲಿ ಶಿಲಕೆಗಳಿಂದ ಕೂಡಿದ ಆಲಿಕೆ (ನೆಫ್ರೋಸ್ಟೋಮ್), ಗ್ರಂಥಿಕೋಶಗಳಿಂದ ಕೂಡಿದ ಭಾಗಗಳಿರುತ್ತವೆ. ನೆಫ್ರೋಸ್ಟೋಮ್ ನಡುಪೊರೆ ಮುಂಭಾಗದಲ್ಲಿ ತೆರೆದರೆ ಕೂಡಿರದ ಭಾಗಗಳಿರುತ್ತವೆ. ನೆಫ್ರೋಸ್ಟೋಮ್ ನಡುಪೊರೆಯ ಹಿಂಭಾಗದಲ್ಲಿರುತ್ತದೆ. ಅಲ್ಲದೆ ಈ ನಳಿಕೆ ದೇಹದ ಹೊರಭಾಗದಲ್ಲಿ ನೆಫ್ರೀಡಿಯೋಪೋರ್ ಎಂಬ ದ್ವಾರದ ಮೂಲಕ ಹೊರತೆಗೆಯುತ್ತದೆ. ನರಮಂಡಲದಲ್ಲಿ ಒಂದು ಜೊತೆ ಗ್ಯಾಂಗ್ಲಿಯಗಳಿಂದ ಕೂಡಿದ ಮಿದುಳು, ಪೆರಿಈಸೋಫ್ಯಾಗಸಿನ ನರವಲಯ ಮತ್ತು ಪ್ರತಿಖಂಡದಲ್ಲೂ ಗ್ಯಾಂಗ್ಲಿಯಗಳಿಂದ ಕೂಡಿದ ವೆಂಟ್ರಲ್ ನರಹುರಿ ವಾಸ್ತವವಾಗಿ ಎರಡು ಹುರಿಗಳನ್ನು ಕೂಡಿಸುವ ಗ್ಯಾಂಗ್ಲಿಯದಿಂದ ಇಕ್ಕಡೆಗಳಿಗೆ ಸಣ್ಣ ಸಣ್ಣ ನರಗಳು ಹೊರಡುತ್ತವೆ.

 ಕೀಟಾಪೊಡಾ ಗುಂಪಿನಲ್ಲಿ ಹೆಣ್ಣುಗಂಡೆಂಬ ಲಿಂಗಭೇದವಿರಬಹುದು ಅಥವಾ ಒಂದೇ ಪ್ರಾಣಿಯ ದೇಹದಲ್ಲಿ ಗಂಡುಹೆಣ್ಣುಗಳಿಗೆ ಸಂಬಂಧಿಸಿದ ಪ್ರಜನನ ಗ್ರಾಂಥಿಗಳಿರಬಹುದು. ಇವುಗಳಲ್ಲೆಲ್ಲ ಗ್ಯಾಮೀಟುಗಳು ಸೀಲೋಮ್‍ನ ಪೊರೆಯಿಂದಲೇ ಉದ್ಭವಾಗುತ್ತವೆ. ಗರ್ಭಾಂಕುರಿತ ಅಂಡಾಣು ಬೆಳೆವಣಿಗೆ ಹೊಂದಿ ನೇರವಾಗಿ ಫ್ರೌಢವಸ್ಥೆಯನ್ನು ತಲುಪಬಹುದು. ಇಲ್ಲವೆ ತನ್ನ ಬೆಳೆವಣಿಗೆಯ ಹಂತದಲ್ಲಿ ಸ್ವತಂತ್ರವಾಗಿ ಈಜಿ ಜೀವಿಸುವ ಟ್ರೋಕೋಫೋರ್ ಎಂಬ ಡಿಂಭಾವಸ್ಥೆಯಲ್ಲಿ ಕೊಂಚಕಾಲ ಕಳೆದು ಅನಂತರ ಫ್ರೌಢಪ್ರಾಣಿಯಾಗಬಹುದು. ಈ ಡಿಂಭ ಅಂಜೂರದ ಆಕಾರದಲ್ಲಿದ್ದು ಇದಕ್ಕೆ ಅಗಲವಾದ ಮುಂತುದಿಯಿದೆ. ಈ ತುದಿಯಲ್ಲಿ ನೀಳವಾದ ಅನೇಕ ಶಿಲಕೆಗಳಿವೆ. ಪಚನಮಂಡಲ ಸಂಪೂರ್ಣವಾಗಿದ್ದು ಅದರಲ್ಲಿ ಬಾಯಿ, ಈಸೋಫ್ಯಾಗಸ್, ಜಠರ, ಕರುಳು ಮತ್ತು ಗುದದ್ವಾರವನ್ನು ಗುರುತಿಸಬಹುದು. ಕೆಲವು ಡಿಂಭಗಳಿಗೆ ಕಣ್ಣುಗಳಿರುವುದೂ ಉಂಟು. ಅಲ್ಲದೆ ಇವುಗಳಲ್ಲಿ ಒಂದು ಜೊತೆ ಡಿಂಭಾವಸ್ಥೆಯ ನೆಫ್ರೀಡಿಯಂ ಮತ್ತು ಸ್ನಾಯುತಂತುಗಳಿರುತ್ತವೆ. ಇಂಥ ತೇಲೀಜುವ ಡಿಂಭ ಕಾಯಪರಿವರ್ತನೆ ಹೊಂದಿ ಫ್ರೌಢಜೀವಿಯಾಗುತ್ತದೆ.

(ನೋಡಿ- ಆಲಿಗೊ-ಕೀಟ)

(ನೋಡಿ- ಪಾಲಿಕೀಟ)  

(ಬಿ.ಎಸ್.ಬಿ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ